ಎಳೆಗೂಸುಗಳ ಪಾಲನೆ: ಮಗುವನ್ನು ಸಲಹುವುದು ಅತ್ಯಂತ ಜವಾಬ್ದಾರಿಯುತ ವಾದ ಹಾಗೂ ಕಷ್ಟದ ಕೆಲಸ. ಇದರ ಪುರ್ಣ ಹೊಣೆಯಿರುವುದು ಕಂದನಿಗೆ ಜನ್ಮಕೊಟ್ಟ ತಾಯಿಗೆ ಹೆಚ್ಚು. ಏನೂ ಅರಿಯದ ಮುಗ್ದ ಮಗುವನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡುವುದರಲ್ಲಿ ತಾಯಿಗೆ ಅಪುರ್ವ ಆನಂದವಿರುತ್ತದೆ. ಮಗುವನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತನನ್ನಾಗಿ ಬೆಳೆಸುವುದು ಆರೈಕೆಯ ಮೂಲ ತಿರುಳು. ಇದನ್ನು ಯಶಸ್ವಿಯಾಗಿ ನಿರ್ವಹಿಸಲು ತಾಯಿಗೆ ತುಂಬ ಆತ್ಮ ವಿಶ್ವಾಸವಿರಬೇಕು. ಈ ದೃಢತೆಯನ್ನು ಆಕೆ ಸಂಪಾದಿಸಬೇಕಾದರೆ ಆರೈಕೆಯ ಶಾಸ್ತ್ರೀಯಜ್ಞಾನದ ಅರಿವು ಮೊದಲ ಹೆಜ್ಜೆ, ಹಿರಿಯರ ಹಾಗೂ, ಅನುಭವಿಕರ ಮಾತುಗಳಿಗೆ ಕಿವಿಗೊಟ್ಟು, ಅದರಲ್ಲಿ ತನಗೆ ಉಪಯುಕ್ತವಾಗುವಂಥವನ್ನು ಬಳಸಿಕೊಳ್ಳುವುದು ಎರಡನೆಯ ಹೆಜ್ಜೆ.

ಹಸುಗೂಸಿಗೆ ಮುಖ್ಯವಾಗಿ ಬೇಕಾಗಿರುವುದು ತಾಯಿಯ ಪ್ರೀತಿ ಮತ್ತು ಆರೈಕೆ. ಬೆಳೆವಣಿಗೆಗೆ ಅಗತ್ಯವಾದುದು ಆಹಾರ ಮತ್ತು ಪೌಷ್ಟಿಕಾಂಶಗಳು. ಮಗುವಿನ ಆರೋಗ್ಯ ಕಾಪಾಡುವ ಸಾಧನಗಳೂ ತಾಯಿಯಾದವಳಿಗೆ ತಿಳಿದಿರಬೇಕು. ರೋಗ ರುಜಿನಗಳು ಬಾರದಂತೆ ಆಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಲ್ಲದೆ ರೋಗ ನಿದಾನವನ್ನೂ ಅರಿತಿರಬೇಕು. ಮಗು ಸೌಹಾರ್ದಭಾವದಿಂದಲೂ ಶಿಸ್ತು ವಿಧೇಯತೆಗಳಿಂದಲೂ ನಡೆದುಕೊಳ್ಳು ವಂತೆ ಆಕೆ ಶಿಕ್ಷಣ ನೀಡಬೇಕು. ಆದರೂ ಮಗುವಿಗೆ ತನ್ನ ವ್ಯವಹಾರಗಳಲ್ಲಿ ಪುರ್ಣ ಸ್ವಾತಂತ್ರ್ಯವಿರುವಂತೆ ನೋಡಿಕೊಳ್ಳಬೇಕು. ಇಂಥ ಮಕ್ಕಳು ನಾಳಿನ ಸತ್ಪ್ರಜೆಗಳಾಗುತ್ತಾರೆ.

ಮಗುವಿನ ವಯೋಮಾನವನ್ನನುಸರಿಸಿ ಆರೈಕೆಯ ಹಂತಗಳನ್ನು ಮೂರಾಗಿ ವಿಂಗಡಿಸಬಹುದು. 1. ಮಗುವಿನ ಮೊದಲ ಆರುತಿಂಗಳು, 2. ಆರು ತಿಂಗಳಿಂದ ವರ್ಷದವರೆಗೆ, 3. ಒಂದು ವರ್ಷದಿಂದ ಎರಡು ವರ್ಷಗಳವರೆಗೆ.

 ಮಗುವಿನ ಮೊದಲ ಆರುತಿಂಗಳು 
ಈ ಅವಧಿಯಲ್ಲಿ ಮಗು, ತನ್ನೆಲ್ಲ ಪುರೈಕೆಗಳಿಗೆ ತಾಯಿಯನ್ನೇ ಅವಲಂಬಿಸುತ್ತದೆ. ಆಗ ಅದರ ಹೊಟ್ಟೆಗೆ ಆಹಾರವೆಂದರೆ ತಾಯ ಹಾಲು ಇಲ್ಲವೆ ಮೇಲು ಹಾಲು. ತಾಯಿಯ ತೋಳಿನ ಆಶ್ರಯ ಕಂದನಿಗೆ ದೊಡ್ಡ ಆಧಾರ. ಮಗು ಅಸಹಾಯಕವಾಗಿ ಕಂಡರೂ ತನಗೆ ಬೇಕಾದುದೆಲ್ಲವನ್ನೂ ಖಂಡಿತ ದೊರಕಿಸಿಕೊಳ್ಳುತ್ತದೆ.  ಹಸಿವಾದಾಗ ಅಳುತ್ತದೆ.  ಮುಖದ ಮೇಲೆ ಬಟ್ಟೆಯೆಳೆದುಕೊಂಡು ಉಸಿರು ಕಟ್ಟಿದರೆ ಚೀರುತ್ತದೆ.  ಅದನ್ನು ಕೇಳಿದೊಡನೆ ತಾಯಿ ಎಲ್ಲಿದ್ದರೂ ಓಡಿಬರಬೇಕಾಗುತ್ತದೆ.

ಎಳೆಯ ಮಗುವಿಗೆ ತಾಯ ಹಾಲು ಅತ್ಯಂತ ಪುಷ್ಟಿದಾಯಕವೂ ಆರೋಗ್ಯಕರವಾದುದೂ ಆಗಿದೆ. ಇದು ಶುಚಿಯಾದುದೂ ಹೌದು. ತಾಯಿಗೆ ನಿಜವಾದ ಹಾಲು ಬರುವ ಮುಂಚೆ, ಒಂದು ಬಗೆಯ ಹಳದಿ ದ್ರವ ಮೊಲೆಯಿಂದ ಒಸರುತ್ತದೆ. ಇದರಲ್ಲಿ ಮಗುವನ್ನು ಹಲವಾರು ಅಂಟುಜಾಡ್ಯಗಳಿಂದ (ದಡಾರ, ಚರ್ಮ ರೋಗ ಮತ್ತು ನಾಯಿಕೆಮ್ಮು) ತಪ್ಪಿಸುವ ಪ್ರತ್ಯಂಶಗಳು ಇವೆ.  ತಾಯ ಹಾಲು ಮಗುವಿಗೆ ಸುಲಭವಾಗಿ ಜೀರ್ಣವಾಗುತ್ತದೆ.  ಈ ಹಾಲು ಕುಡಿಯುವ ಮಕ್ಕಳಲ್ಲಿ ಅಜೀರ್ಣ, ಭೇದಿ ಆಗುವುದು ಕಡಿಮೆ. ಮಗು ಹುಟ್ಟಿದ ಮೂರನೆಯ ದಿನದಿಂದ ತಾಯಿ ಹಾಲು ಕೊಡುತ್ತಾಳೆ.  ಮೊದಲು ಮೂರು ಗಂಟೆಗಳಿಗೊಂದಾವರ್ತಿ ಹಾಲು ಕೊಡಬಹುದು. ಮಗುವಿಗೆ ಮೂರುತಿಂಗಳಾಗುವ ಹೊತ್ತಿಗೆ ನಾಲ್ಕು ಗಂಟೆಗೊಮ್ಮೆ ಕೊಟ್ಟರೆ ಸಾಕು. ಕೆಲವು ಮಕ್ಕಳು ಈ ರೂಢಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.  ಮತ್ತೆ ಕೆಲವಕ್ಕೆ ಈ ಲೆಕ್ಕಾಚಾರ ಒಗ್ಗುವುದೇ ಇಲ್ಲ.  ಇಂಥ ಮಕ್ಕಳು ಹಸಿವೆಯಾಗಿ ಅತ್ತಾಗಲೆಲ್ಲ ಹಾಲು ಕೊಡಬಹುದು.  ಮೊಲೆಹಾಲು ಮಗುವಿಗೆ ಸಾಕಾಗದಿದ್ದರೆ ಹೊಯ್ ಹಾಲನ್ನು ಕೊಡಬಹುದು.  ಒಳ್ಳೆಯ ಹಸುವಿನ ಹಾಲು ಸಿಕ್ಕಿದರೆ ಅದನ್ನೆ ಮಗುವಿಗೆ ಕೊಡಬಹುದು. ಇಲ್ಲದಿದ್ದರೆ ಡಬ್ಬದ ಹಾಲಿನ ಪುಡಿಯಿಂದ ಹಾಲು ತಯಾರಿಸಿ ಮಗುವಿಗೆ ನೀಡಬಹುದು.  ಒಂದು ಔನ್ಸ್‌ ನೀರಿಗೆ ಒಂದು ಚಮಚ ಹಾಲಿನ ಪುಡಿಯನ್ನು ಹಾಕಬೇಕು. ಮಗುವಿಗೆ ನಾಲ್ಕು ಔನ್ಸ್‌ ಹಾಲು ತಯಾರಿಸಬೇಕಾಗಿದ್ದರೆ ಕುದಿಸಿದ ನಾಲ್ಕು ಔನ್ಸ್‌ ನೀರನ್ನು ಇನ್ನೊಂದು ಲೋಟದಲ್ಲಿರಿಸಿಕೊಂಡು ಆ ನೀರನ್ನು ಸ್ವಲ್ಪ ಸ್ವಲ್ಪವಾಗಿ ಪುಡಿಗೆ ಹಾಕಿ ಹದವಾಗಿ ಕಲಕಿ, ಅನಂತರ ಉಳಿದ ನೀರನ್ನು ಸುರಿಯಬಹುದು. ಹಾಲನ್ನು ಕುಡಿಸುವ ಕುಪ್ಪಿ ಮತ್ತು ರಬ್ಬರಿನ ಮೊಲೆ ತೊಟ್ಟುಗಳನ್ನು ಕುದಿಯುವ ನೀರಿನಲ್ಲಿ ತೊಳೆದು ಶುಚಿಯಾಗಿರಿಸಿಕೊಳ್ಳಬೇಕು. ಮಗು ಹಾಲು ಕುಡಿದಾದ ಮೇಲೆ ಬೆನ್ನು ನೀವಿ ತೇಗು ಬರಿಸಿ, ಒಳ ಸೇರಿದ ವಾಯುವನ್ನು ಹೊರಗೆ ಹಾಕಬೇಕು. ಮಗುವಿಗೆ ನಾಲ್ಕುತಿಂಗಳಾಗುವ ಹೊತ್ತಿಗೆ ಬರಿಯ ಹಾಲೊಂದೇ ಸಾಕಾಗುವುದಿಲ್ಲ. ಅದಕ್ಕಿಂತ ಶಕ್ತಿಯುತವಾದ ಹಾಗೂ ರುಚಿಕರವಾದ ಆಹಾರ ಬೇಕು. ಈ ವಯಸ್ಸಿನಲ್ಲಿ ದ್ವಿದಳ ಧಾನ್ಯಗಳಿಂದ ತಯಾರಿಸಲಾದ ಫ್ಯಾರಿಕ್ಸಿನಂಥ ಆಹಾರವನ್ನು ತುಸುಗಟ್ಟಿಯಾಗಿ ಮಾಡಿ ಮಗುವಿಗೆ ತಿನ್ನಿಸಬಹುದು. ರಾಗಿ, ಗೋಧಿಗಳ ಅಂಬಲಿಗಳನ್ನೂ ಅನ್ನದಿಂದ ತಯಾರಿಸುವ ಮಣ್ಣಿಯನ್ನೂ ಕೊಡಬಹುದು. ಮಗುವಿಗೆ ಒಂದು ತಿಂಗಳಾಗುವ ಹೊತ್ತಿಗೆ ಕಿತ್ತಳೆ ಅಥವಾ ಮೂಸಂಬಿ ರಸವನ್ನು ಆರಂಭಿಸಬೇಕು. ಇದರಿಂದ ಮಗುವಿಗೆ ಮಲಬದ್ದತೆಯ ಕಾಟ ತಪ್ಪುತ್ತದೆ.

 ಹೊಯ್ ಹಾಲು 
ತಾಯ ಹಾಲಲ್ಲದೆ ಬೇರೆ ಆಹಾರವನ್ನು ಮಗುವಿಗೆ ಕೊಟ್ಟಾಗ ಅದನ್ನು ಕೃತಕ ಆಹಾರ ಪೋಷಣೆ ಎನ್ನುತ್ತಾರೆ. ಹಸು, ಎಮ್ಮೆ, ಮೇಕೆ, ಕತ್ತೆಗಳ ಹಾಲನ್ನು ಬಳಸುವ ಕ್ರಮ ಇದೆ. ಆದರೆ ರೂಢಿಯಲ್ಲಿ ಹಸುವಿನ ಹಾಲನ್ನು ಬಳಸುತ್ತಾರೆ. ಈಚೆಗೆ ಡಬ್ಬಿ ಹಾಲುಗಳನ್ನು ಉಪಯೋಗಿಸುತ್ತಿದ್ದಾರೆ. ಇವುಗಳಲ್ಲಿ ಮುಖ್ಯವಾದುವು : 1 ಹಸುವಿನ ಹಾಲು, 2 ಒಣಹಾಲು-ಪುರ್ಣಕೆನೆ ಮತ್ತು ಅರ್ಧಕೆನೆ-ಹೀಗೆ ಎರಡು ವಿಧ, 3 ಘನೀಕರಿಸಿದ ಹಾಲು, 4 ಸರಿದೂಗಿಸಿದ ಹಾಲು-ಆಂದರೆ, ಆಮ್ಲೀಕರಣ, ಕ್ಷಾರೀಕರಣ ಮತ್ತು ಕಿಣ್ವೀಕರಣ ಮೊದಲಾದ ಅನೇಕ ಕ್ರಮಗಳಿಂದ ಹಾಲು ಸುಲಭವಾಗಿ ಜೀರ್ಣವಾಗುವಂತೆ ಮಾಡಿದ್ದು, 5 ಎದೆಹಾಲನ್ನು ಹೋಲುವಂತೆ ತಯಾರಿಸಿದ ಹಸುವಿನ ಹಾಲು, 6 ಸಾರ ಹೆಚ್ಚಿಸಿದ ಹಾಲುಗಳು.
ಭಾರತದಲ್ಲಿ ಸಾಮಾನ್ಯವಾಗಿ ಕೃತಕ ಆಹಾರ ಪೋಷಣೆಗೆ ಹಸುವಿನ ಹಾಲು ಮತ್ತು ಈಚೆಗೆ ಅಮೂಲ್ ಡಬ್ಬಿ ಹಾಲು ಬಳಕೆಯಲ್ಲಿವೆ.
ಒಂದು ಪೌಂಡ್ ತೂಕದ ದೇಹಕ್ಕೆ ದಿನವೊಂದಕ್ಕೆ 2 1/2 ಔನ್ಸ್‌ (50 ಕೆಲೊರಿ) ಹಾಲು ಬೇಕಾಗಬಹುದು. ಎರಡು ವರ್ಷ ತುಂಬುವವರೆಗೂ ಇದೇ ಲೆಕ್ಕಾಚಾರ ಸರಿಯಾಗುತ್ತದೆ.
ಈ ಪ್ರಮಾಣವನ್ನು ಲೆಕ್ಕಮಾಡುವ ವಿಧಾನಗಳು ಹೀಗಿವೆ:
 ಹಸುವಿನ ಹಾಲು ಅಥವಾ ಕೆನೆತೆಗೆಯದ ಹಾಲು	20 ಕೆ./ಔನ್ಸ್‌
 ಅರ್ಧ ಕೆನೆತೆಗೆದ ಹಾಲು	. . .		15  
 ಪುರ್ಣ ಕೆನೆತೆಗೆದ ಹಾಲು	. . .		10  
 ತಲೆ ಸವರಿದ ಒಂದು ಚಮಚ ಸಕ್ಕರೆ	. . .		15  
 ಗಟ್ಟಿ ಹಾಲನ್ನು ನೀರು ಬೆರೆಸಿ ತೆಳ್ಳಗೆ ಮಾಡುವಾಗ-
   ಹಾಲಿನ ಭಾಗ   ನೀರಿನ ಭಾಗ ಒಂದು ತಿಂಗಳ ವರೆಗೆ	  ೧  ೧ ಒಂದರಿಂದ ಎರಡು ತಿಂಗಳ ವರೆಗೆ  ೨  ೧ 2-3 ತಿಂಗಳ ವರೆಗೆ  ೩  ೧ 3-4 ತಿಂಗಳ ವರೆಗೆ  ೪  ೧ 4-5 ತಿಂಗಳ ವರೆಗೆ  ೫  ೧
	
ಈ ಪ್ರಮಾಣಗಳನ್ನು ಗಮನಿಸಬಹುದು.  ಐದು ತಿಂಗಳ ಅನಂತರ ಅಪ್ಪಟ ಹಾಲನ್ನು ಕೊಡಬಹುದು.

ಹಾಲಿಗೆ ಬೆರೆಸಲು ಸಾಧಾರಣ ಕಬ್ಬಿನ ಸಕ್ಕರೆ ಸಾಕಷ್ಟು ಒಳ್ಳೆಯದು. ಸಾಮಾನ್ಯವಾಗಿ ನಾಲ್ಕು ತಿಂಗಳವರೆಗೆ ಮೂರು ಔನ್ಸ್‌ ಹಾಲಿಗೆ ಒಂದು ಚಮಚ ಸಕ್ಕರೆಯನ್ನೂ ಅನಂತರ ನಾಲ್ಕು ಔನ್ಸ್‌ ಹಾಲಿಗೆ ಒಂದು ಚಮಚ ಸಕ್ಕರೆಯನ್ನೂ ಹಾಕಬಹುದು.

ಮೂರು ತಿಂಗಳವರೆಗೆ ಮೂರು ಗಂಟೆಗಳ ಅಂತರದಲ್ಲಿ ದಿನಕ್ಕೆ ಆರು ಬಾರಿ ಅನಂತರ ನಾಲ್ಕು ಗಂಟೆಗಳಿಗೊಮ್ಮೆ ಐದು ಬಾರಿ ಹೊಯ್ ಹಾಲು ಹಾಕಬಹುದು.
ಹನ್ನೆರಡು ವಾರಗಳ ಮಗುವಿನ ತೂಕ ಬಹುಶಃ ಹತ್ತು ಪೌಂಡು ಇರಬಹುದು. ಆದ್ದರಿಂದ ದಿನದ ದ್ರವದ ಆವಶ್ಯಕತೆ 21/2´10=25 ಔನ್ಸುಗಳು. ಮೂರು ತಿಂಗಳ ತನಕ ಹಾಲಿಗೆ ನೀರು ಬೆರೆಸುವುದರಿಂದ 3:1 ಅಂದರೆ ಆರು ಔನ್ಸ್‌ ನೀರು ಮತ್ತು 19 ಔನ್ಸ್‌ ಹಾಲಿರುತ್ತದೆ.

10 ಪೌಂಡಿನ ಮಗುವಿಗೆ ಬೇಕಾಗುವ ಕೆಲೊರಿಗಳು 10*50 ಆಗಿರುವುದರಿಂದ ಸಂಮಿಶ್ರಣ ಈ ರೀತಿಯಿರುತ್ತದೆ.
 ಹಾಲು	10	ಔನ್ಸುಗಳು	380	ಕೆಲೊರಿ
 ನೀರು	 6    		....	
 ಸಕ್ಕರೆ	 8	ಚಮಚಗಳು	120	ಕೆಲೊರಿ
 ಒಟ್ಟು	25	ಔನ್ಸುಗಳು	500	ಕೆಲೊರಿ	(ಪಿ.ಸಿ.ಬಿ.)

ಮಗುವಿಗೆ ದಿನವೂ ಸ್ನಾನಮಾಡಿಸುವ ಪದ್ದತಿ ಉಷ್ಣದೇಶವಾದ ಭಾರತದಲ್ಲಿ ಒಳ್ಳೆಯದು. ಸ್ನಾನಕ್ಕೆ ಮುಂಚೆ ಮಗುವಿಗೆ ಕೊಬ್ಬರಿ ಎಣ್ಣೆಯನ್ನೂ ಹರಳೆಣ್ಣೆಯನ್ನೋ ಹಚ್ಚಬಹುದು. ಇದರಿಂದ ಮಗುವಿನ ಮೈಕೈನೋವು ಕಡಿಮೆಯಾಗುವುದಲ್ಲದೆ, ಚರ್ಮವ್ಯಾಧಿಗಳು ಮಿತಗೊಳ್ಳುತ್ತವೆ. ಎಣ್ಣೆಯನ್ನು ಕಿವಿ, ಮೂಗು, ಕಣ್ಣುಗಳಿಗೆ ಹಾಕಬಾರದು. ತಾಯಿ ಅಥವಾ ದಾದಿ ಮಗುವನ್ನು ಕಾಲಮೇಲೆ ಮಲಗಿಸಿಕೊಂಡು ಮೀಯಿಸುವುದು ರೂಢಿ. ಎರೆಯುವ ನೀರು ತುಂಬ ಬಿಸಿಯಾಗಿರಬಾರದು. ತೀರ ತಣ್ಣಗೂ ಇರಬಾರದು. ಹದವಾದ ನೀರು ಯೋಗ್ಯ. ಎಣ್ಣೆ ತೆಗೆಯಲು ಸೋಪನ್ನೋ ಕಡಲೆ ಅಥವಾ ಹೆಸರುಹಿಟ್ಟನ್ನೊ ಬಳಸಬಹುದು. ಸ್ನಾನದ ಬಳಿಕ ಮಗುವಿನ ಮೈಕೈ ಚೆನ್ನಾಗಿ ಒರೆಸಿ, ಮೈ, ಕಂಕಳು, ಕತ್ತು ಹಾಗೂ ತೊಡೆಯ ಸಂಧಿಗಳಿಗೆ ಹೇರಳವಾಗಿ ಪೌಡರ್ ಬೆವರನ್ನು ಹೀರುವುದಲ್ಲದೆ, ಚರ್ಮ ಬಿರಿಯುವುದನ್ನು ತಪ್ಪಿಸುತ್ತದೆ.

ಮಗುವಿನ ಉಡುಪು ಸ್ವಲ್ಪ ಆಳ್ಳಕವಾಗಿರುವುದು ಒಳ್ಳೆಯದು, ಬೇಸಗೆಯಲ್ಲಿ ತೆಳ್ಳಗಿನ ಅಂಗಿಯೇ ಸಾಕು, ಚಳಿಗಾಲದಲ್ಲಿ ಬೆಚ್ಚಗಿನ ಉಣ್ಣೆಯ ಬಟ್ಟೆಗಳು ಯೋಗ್ಯ. ಸದಾ ಕೈ ತುಂಬ ಸ್ವೆಟರ್, ಟೊಪ್ಪಿಗಳನ್ನು ಕಟ್ಟುವ ಅಗತ್ಯವಿಲ್ಲ.

ಹೊಕ್ಕಳುಬಳ್ಳಿ ಸಾಧಾರಣವಾಗಿ ಎಂಟನೆಯ ದಿನ ಉದುರಿ ಹೋಗುತ್ತದೆ. ಅದು ಉದುರಿದ ಜಾಗ ಸ್ವಲ್ಪ ದಿನ ಹಸಿಯಾಗಿರುವುದರಿಂದ, ಸ್ನಾನವಾದ ಮೇಲೆ, ಹೊಕ್ಕಳಿಗೆ ಸ್ವಲ್ಪ ಸ್ಪಿರಿಟ್ ಹಚ್ಚಿ, ಸ್ವಚ್ಛಮಾಡಿ ಬೋರಿಕ್ ಪೌಡರು ಹಾಕಿ ಒಂದು ಬಟ್ಟೆಯನ್ನು ಕಟ್ಟಬೇಕು.

ಎಳೆಯ ಮಗುವಿಗೆ ಸಾಧಾರಣವಾಗಿ ಉಂಟಾಗುವುದು ಅಜೀರ್ಣ ವಾಂತಿ ಮತ್ತು ಭೇದಿ. ಅಜೀರ್ಣವಾದಾಗ ಅಥವಾ ಹೊಟ್ಟೆಯಲ್ಲಿ ವಾಯು ತುಂಬಿಕೊಂಡಾಗ ಮಗು ಕೈಕಾಲುಗಳನ್ನು ಬಡಿಯುತ್ತ ಚೀರಿ ಅಳಲಾರಂಭಿಸುತ್ತದೆ. ಹೂಸು ಬಿಡುತ್ತದೆ. ಹೊಟ್ಟೆ ಉಬ್ಬರಿಸಿಕೊಂಡು ಗಟ್ಟಿಯಾಗಿರುತ್ತದೆ. ಇದನ್ನು ತಪ್ಪಿಸಲು ಈ ಮೊದಲೇ ಹೇಳಿದಂತೆ ಮಗುವಿಗೆ ಹಾಲು ಕುಡಿಸಿದ ಒಡನೆಯೇ ತೇಗು ಬರಿಸಿ ವಾಯುವನ್ನು ಹೊರ ಹಾಕುವುದು ಒಂದು ಉಪಾಯ. ಒಂದು ಚಮಚ ಗ್ರೈಪ್ ವಾಟರನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಸಿ ಹೊಟ್ಟೆಗೆ ತುಸು ಶಾಖ ಕೊಡಬೇಕು.
ಕಕ್ಕಿದ ಮಗು ದಕ್ಕುತ್ತದೆ ಎಂದು ಹಿರಿಯರು ಅನ್ನುತ್ತಾರೆ. ಆದ್ದರಿಂದ ಮಕ್ಕಳು ವಾಂತಿ ಮಾಡುವುದು ಸಾಮಾನ್ಯವಾದ ವಿಷಯ ಎಂದಾಯಿತು. ಮಗು ದಿನಕ್ಕೆ ಒಂದೆರೆಡು ಬಾರಿ ವಾಂತಿ ಮಾಡಿದಾಗ ವೈದ್ಯರ ಸಲಹೆ ಕೇಳುವುದು ಒಳ್ಳೆಯದು. 

ಭೇದಿಯಾಗುವ ಮಗುವಿಗೆ ಸುಲಭವಾಗಿ ಜೀರ್ಣಿಸುವಂಥ ಆಹಾರ ಕೊಡಬೇಕು. ಗ್ಲೂಕೋಸ್ ನೀರು, ಸೇಬುಹಣ್ಣಿನ ರಸ, ತೆಳ್ಳಗಿನ ಹಾಲು ಯೋಗ್ಯವಾದುವು.
ಮಗುವಿಗೆ ಎರಡು ತಿಂಗಳಾದೊಡನೆ ದಾಕು ಹಾಕಿಸಬೇಕು. ಮೂರು ನಾಲ್ಕು ತಿಂಗಳುಗಳಿಗೆ ಕ್ರಮವಾಗಿ ತಿಂಗಳಿಗೊಂದರಂತೆ ಟ್ರಿಪಲ್ ಆಂಟಿಜೆನ್ ಚುಚ್ಚುಮದ್ದು ಕೊಡಿಸಬೇಕು. ಚರ್ಮರೋಗ, ವಾಯುರೋಗ ಮತ್ತು ನಾಯಿ ಕೆಮ್ಮು ಮಗುವಿಗೆ ಬಾರದಂತೆ ಇದು ರಕ್ಷಿಸುತ್ತದೆ.

 ಆರು ತಿಂಗಳಿಂದ ವರ್ಷದವರೆಗೆ 
ಮಗುವಿಗೆ ಐದು ತಿಂಗಳು ತುಂಬಿ ಆರರಲ್ಲಿ ಬೀಳುವ ಹೊತ್ತಿಗೆ ಅದರ ತೂಕ ಇಮ್ಮಡಿಸುತ್ತದೆ. ಆಗಿನ ಮಾನಸಿಕ ಬೆಳೆವಣಿಗೆಯೂ ಗಮನಾರ್ಹ. ಮಗು ತನ್ನ ತಾಯಿ ತಂದೆಗಳನ್ನು ಗುರುತಿಸುತ್ತದೆ. ಮಾತನಾಡಿಸಿದರೆ ಅರ್ಥವಾದಂತೆ ನಗುತ್ತದೆ. ಆಟಿಕೆ ಕೊಟ್ಟರೆ ಕೈಯಲ್ಲಿರಿಸಿಕೊಂಡು ಆಡಿಸುತ್ತದೆ.

ನಾಲ್ಕು ತಿಂಗಳ ಹೊತ್ತಿಗೆ ಮಗು ಮಗುಚಿಕೊಳ್ಳಬಹುದು. ಬಳಿಕ ಒಂದೆರಡು ತಿಂಗಳಲ್ಲೆ ಮುಂದೆ ಸರಿದು ಆರು ತಿಂಗಳು ತುಂಬುವ ಹೊತ್ತಿಗೆ ಅಂಬೆಗಾಲಿಕ್ಕುತ್ತದೆ. ಎಂಟು ತಿಂಗಳಿಗೆ ಕುಳಿತು ಹತ್ತರಿಂದ ವರ್ಷದೊಳಗೆ ನಡೆದಾಡಬಹುದು. ಸಾಧಾರಣವಾಗಿ ಎಂಟು ತಿಂಗಳಿಗೆ ಮಗುವಿಗೆ ಹಲ್ಲು ಮೊಳೆಯಲಾರಂಭವಾಗುತ್ತದೆ. ಹಲ್ಲುಗಳು ಚೆನ್ನಾಗಲು ಕ್ಯಾಲ್ಸಿಯಂ, ಫಾಸ್ಪರಸ್, ಸಿ ಮತ್ತು ಡಿ ಜೀವಾತು ಅಗತ್ಯ. ಈ ಅವಧಿಯಲ್ಲಿ ಮಗು ಕೈಗೆ ಸಿಕ್ಕಿದ ವಸ್ತುಗಳನ್ನು ಕಚ್ಚಬಹುದು. ವಿನಾಕಾರಣ ಚಂಡಿ ಹಿಡಿಯಬಹುದು. ಆಗ ಅದನ್ನು ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳಬೇಕು.

ಆರು ತಿಂಗಳು ತುಂಬಿದ ಮಗು ಗಟ್ಟಿಆಹಾರವನ್ನು ಇಷ್ಟಪಡುತ್ತದೆ. ಫಾರೆಕ್ಸ್‌, ಅಂಬಲಿ, ಮಣ್ಣೆಗಳ ಜೊತೆಗೆ ಸೇಬುಹಣ್ಣನ್ನು ಬೇಯಿಸಿ ಕೊಡಬಹುದು. ತರಕಾರಿಗಳನ್ನು ಬೇಯಿಸಿ ಚೆನ್ನಾಗಿ ಹಿಸುಕಿ ದಿನಕ್ಕೊಮ್ಮೆ ನೀಡಿದರೆ ಮಗು ಪ್ರೀತಿಯಿಂದ ತಿನ್ನುತ್ತದೆ.  ಎಂಟು ತಿಂಗಳ ಮಗುವಿಗೆ ಮೃದುವಾದ ಅನ್ನಕ್ಕೆ ಸ್ವಲ್ಪ ಉಪ್ಪು ಮತ್ತು ತುಪ್ಪ ಹಾಕಿ ಕೊಡಬಹುದು. ಅಥವಾ ತಿಳಿಸಾರು ಅನ್ನ ಇಲ್ಲವೆ ಮೊಸರನ್ನು ನೀಡಬಹುದು.

ಪೋಲಿಯೋ ಮೈಲೈಟಿಸ್ ಎಂಬ ಮಕ್ಕಳ ಪಾಶರ್ವ್‌ವಾಯು ಬಾರದಂತೆ ಮಗುವಿಗೆ ಆರು ತಿಂಗಳಾದೊಡನೆ ಪೋಲಿಯೊ ತೊಟ್ಟುಗಳನ್ನು ಕೊಡಿಸಬೇಕು. ಆರು ವಾರಕ್ಕೊಂದರಂತೆ ಮೂರು ಬಾರಿ ಈ ತೊಟ್ಟುಗಳು ಅಗತ್ಯ. ಇದಾದೊಡನೆ ಕ್ಷಯರೋಗದ ವಿರುದ್ಧ ಬಿಸಿಜಿ ಚುಚ್ಚುಮದ್ದು ಕೊಡಿಸಬೆಕು.  ಇಲ್ಲಿಗೆ ಮಗುವಿಗೆ ಕೊಡಿಸಬೇಕಾದ ಚುಚ್ಚುಮದ್ದುಗಳೆಲ್ಲ ಮುಗಿಯುತ್ತವೆ.

 ಒಂದು ವರ್ಷದಿಂದ ಎರಡರವರೆಗೆ 
ಒಂದು ವರ್ಷದ ಮಗುವಿಗೆ ತನ್ನದೇ ಆದ ವ್ಯಕ್ತಿತ್ವವಿದೆ. ಅದಕ್ಕೆ ಮನ ಬಂದ ಕಡೆ ನಡೆಯಲು ಬರುತ್ತದೆ. ತನ್ನದೇ ಆದ ಇಷ್ಟ ಅನಿಷ್ಟ ಗಳೂ ಅದಕ್ಕೆ ಇವೆ.  ತಂದೆ ತಾಯಿಗಳನ್ನು ಅನುಕರಿಸಿ ಎಲ್ಲ ಕಾರ್ಯಗಳನ್ನು ಕಲಿಯುವ ಚುರುಕುತನ ಕೂಡ ಅದಕ್ಕುಂಟು. ಇದಕ್ಕೆ ಮಾತಾ ಪಿತೃಗಳು ಪ್ರೋತ್ಸಾಹ ನೀಡಬೇಕು.

ಮಗುವಿನ ಕಲ್ಪನಾಶಕ್ತಿ ಈಗ ಬೆಳೆಯುತ್ತಿದೆ. ಇಲ್ಲದ್ದನ್ನು ಊಹಿಸಿ ಭಯಪಡುವ ಅವಸ್ಥೆಯೂ ಉಂಟು. ಗರಿಗಳು, ಎಲೆಗಳು, ಹರಿದಾಡುವ ಜಿರಳೆಗಳು ಇವನ್ನು ಕಂಡರೆ ಮಗುವಿಗೀಗ ಅಂಜಿಕೆ.  ತಾಯಿ ಅವುಗಳಿಂದ ಅಪಾಯವಿಲ್ಲ ಎಂಬುದನ್ನು ಮಗುವಿಗೆ ಮನದಟ್ಟು ಮಾಡಿಸಿ ಆತ್ಮವಿಶ್ವಾಸವನ್ನು ತುಂಬಬೇಕು. ತನ್ನ ಕಣ್ಣಿಗೆ ಕಂಡವಸ್ತುಗಳನ್ನೆಲ್ಲ ಮಗು ಪರೀಕ್ಷಿಸಲು ಯತ್ನಿಸುತ್ತದೆ. ಆಗ ಅದರ ಕುತೂಹಲ ತಣಿಸುವುದು ಒಳ್ಳೆದು. ಆದರೆ ಅಪಾಯಕಾರೀ ವಸ್ತುಗಳಾದ ಸ್ಟವ್, ಸ್ವಿಚ್, ಇಸ್ತ್ರಿ ಪೆಟ್ಟಿಗೆ ಇಂಥವುಗಳಿಂದ ಅದನ್ನು ದೂರವಿಡಬೇಕು. ಸುಲಭ ಮಾರ್ಗವೆಂದರೆ ಬಿಸಿ ಇತ್ಯಾದಿಗಳನ್ನು ಮುಟ್ಟಿಸಿ ತೋರಿಸುವುದು ಒಳ್ಳೆಯದು. ಇದು ಸುಡುತ್ತದೆ ಎಂದು ತಿಳಿದ ಮೇಲೆ ಮಗು ಒಲೆಯ ಹತ್ತಿರ ಹೋಗುವುದಿಲ್ಲ. ಮಗುವಿನ ಪ್ರಶ್ನೆಗಳಿಗೆ ತಂದೆ ತಾಯಿ ಬೇಸರವಿಲ್ಲದೆ ಉತ್ತರಿಸಬೇಕು. ಇದರಿಂದ ಅದರ ಬುದ್ದಿಶಕ್ತಿ ಅರಳುತ್ತದೆ. ಈ ವಯಸ್ಸಿನಲ್ಲಿ ಮಗುವಿಗೆ ಸಾಕಷ್ಟು ಶಬ್ದಗಳನ್ನು ಉಚ್ಚರಿಸಲು, ಬಳಸಿ ಮಾತನಾಡಲು ಕಲಿಸಬೇಕು. ಕೈಕೆಲಸದ ಜಾಣ್ಮೆಯ ಕಡೆ ಮನಸ್ಸು ಒಲಿಯುವಂತೆ ಮಾಡಬೇಕು. ಕುತೂಹಲಗಳನ್ನು ತಣಿಸಬೇಕು. ತರ್ಕಬದ್ದವಾಗಿ ಆಲೋಚನೆ ಮಾಡುವುದನ್ನು ಕಲಿಸಬೇಕು. ಓಡಾಡುವ ಕಂದನಿಗೆ ಸರಳ ಆಟಿಕೆಗಳೇ ಇಷ್ಟ. ಅವುಗಳ ಜೊತೆ ತಾನು ಆಡುವುದಲ್ಲದೆ ನೆರೆಹೊರೆಯ ಮಕ್ಕಳಲ್ಲೂ ಅವನ್ನು ಹಂಚಿಕೊಂಡು ಆಡಿದರೆ ಚೆನ್ನು ಎಂಬ ಭಾವನೆಯನ್ನು ಮಗುವಿನಲ್ಲಿ ಎಳೆತನದಿಂದ ಬೆಳೆಸಿದರೆ ಒಳ್ಳೆಯದು. ತನ್ನ ಕೈಗೆ ಸಿಕ್ಕ ಆಟಿಕೆಗಳನ್ನು, ಇತರ ಪದಾರ್ಥಗಳನ್ನು ಹರಿಯುವ, ಮುರಿಯುವ, ಬಡೆದು ಶಬ್ಧಮಾಡುವ, ಎಸೆಯುವ, ನೆಕ್ಕಿ ನೋಡುವ, ಮತ್ತೆ ಜೋಡಿಸುವ ಆಸೆ ಮಗುವಿನಲ್ಲಿ ವಿಪರೀತವಾಗಿರುತ್ತದೆ. ಸಾಧ್ಯವಾದ ಮಟ್ಟಿಗೂ ಹಿರಿಯರು ಅದಕ್ಕೆ ಅಡ್ಡಿ ಬರಬಾರದು. ಅಪಾಯವಾಗದಂತೆ ಮಾತ್ರ ನೋಡಿಕೊಳ್ಳುತ್ತಿರಬೇಕು. ಹೀಗೆ ಮಾಡುವುದ ರಿಂದ ಮಗುವಿಗೆ ಆತ್ಮ ವಿಶ್ವಾಸ ಹೆಚ್ಚುತ್ತದೆ. ಒಂದು ವರ್ಷದ ಮಗುವಿಗೆ ಮಲ ಮತ್ತು ಮೂತ್ರಗಳನ್ನು ತನಗೆ ಇಷ್ಟ ಬಂದಾಗ ಮಾಡುವ ಹತೋಟಿಯಿಲ್ಲ. ಏಕೆಂದರೆ ಅದರ ನರಮಂಡಲ ಇನ್ನೂ ಪುರ್ಣ ಬೆಳೆವಣಿಗೆಯಾಗಿರುವುದಿಲ್ಲ. ಈ ಅವಧಿಯಲ್ಲಿ ಅದು ತನ್ನ ಚಡ್ಡಿಯಲ್ಲಿ ಮಲಮೂತ್ರಗಳನ್ನು ಮಾಡಿಕೊಳ್ಳಬಹುದು.
ಅದರ ಅರಿವಿಲ್ಲದೆಯೆ ಈ ಕ್ರಿಯೆಗಳು ನಡೆಯುವುದರಿಂದ ಅದಕ್ಕಾಗಿ ಮಗುವನ್ನು ಹೀಯಾಳಿಸಬಾರದು, ಬಂiÀÄ್ಯಬಾರದು. ನಿಯಮಿತ ವೇಳೆಗೆ, ನಿಶ್ಚಿತ ಸ್ಥಳದಲ್ಲಿ ಮಗು ಮಲಮೂತ್ರಗಳನ್ನು ಮಾಡುವಂತೆ ಸಹನೆಯಿಂದ ತಾಯಿ ಹೇಳಿಕೊಡಬೇಕು. ಎರಡು ವರ್ಷ ವಯಸ್ಸಾಗುವ ವೇಳೆಗೆ ನರಮಂಡಲವನ್ನು ಪುರ್ಣವಾಗಿ ತನ್ನ ಹತೋಟಿಯಲ್ಲಿರಿಸಿಕೊಳ್ಳಲು ಮಗು ಕಲಿಯುತ್ತದೆ.

ಮಗುವಿನ ದೈಹಿಕ ಆರೋಗ್ಯದಷ್ಟೇ ಮುಖ್ಯವಾದ್ದು ಅದರ ನಡೆವಳಿಕೆ ಮತ್ತು ವಿಧೇಯತೆ. ತಾಯಿಯ ನಡತೆ, ನೆರೆಹೊರೆಯವರೊಂದಿಗೆ ಆಕೆಯ ವರ್ತನೆ ಇವನ್ನು ಮಗು ಅನುಕರಿಸುತ್ತದೆ. ಆದ್ದರಿಂದ ತಾಯಿ ಒಳ್ಳೆಯವಳಾದರೆ ಮಗುವೂ ಯೋಗ್ಯ ನಡೆವಳಿಕೆ ಕಲಿಯುತ್ತದೆ. ಆಜ್ಞೆಮಾಡುವುದರಿಂದ ಮಗು ವಿಧೇಯತೆಯನ್ನು ಕಲಿಯುವುದಿಲ್ಲ. ಉಪಾಯವಾಗಿ, ಸ್ನೇಹಪುರ್ಣವಾಗಿ ಸ್ಥಿರತೆಯಿಂದ ತಾಯಿ ವರ್ತಿಸಿದರೆ, ಮಗು ಕಲಿಯುವುದು ಸುಲಭವಾಗುತ್ತದೆ. ನೆರೆ ಮಕ್ಕಳೊಂದಿಗೆ ಸ್ನೇಹಸೌಹಾರ್ದ ಭಾವನೆಗಳು ಬೆಳೆಯುವಂತೆ ಆಕೆ ಪ್ರೋತ್ಸಾಹಿಸಬೇಕು. ಪ್ರತಿ ತಪ್ಪಿಗೂ ಏಟುಕೊಡುವುದರಿಂದ ಮಗು ಹಠಮಾರಿಯಾಗುತ್ತದೆ. ತೀರ ಅಗತ್ಯವಿದ್ದಾಗ ಮಾತ್ರ ಮಗುವನ್ನು ಶಿಕ್ಷಿಸಲು ತಾಯಿ ತಂದೆ ಹಿಂದೆಮುಂದೆ ನೋಡಬಾರದು.

ಮಕ್ಕಳಿಗೆ ಸಾಮಾನ್ಯವಾಗಿ ಬರುವ ಕಾಯಿಲೆಗಳೆಂದರೆ ನೆಗಡಿ, ಕೆಮ್ಮು, ಜ್ವರ ಭೇದಿ, ವಾಂತಿ-ಇವು. ಸೋಂಕು ರೋಗಗಳಾದ ದಡಾರ, ಗಣಜಿಲೆ, ಕೆನ್ನೆಬಾವು ಇವುಗಳೂ ಸಾಧಾರಣವಾಗಿ ಈ ವಯೋಮಾನದಲ್ಲಿ ಕಾಣಿಸಿಕೊಳ್ಳಬಹುದು. ಈ ಕಾಯಿಲೆಗಳಿಗೆ ತಂದೆ ತಾಯಿ ಚಿಕಿತ್ಸೆ ಮಾಡಲು ಹೋಗಬಾರದು.  ಅಗತ್ಯ ಕಂಡೊಡನೆ ಮಗುವನ್ನು ವೈದ್ಯರಲ್ಲಿಗೆ ಒಯ್ಯಬೇಕು.

ಕಾಯಿಲೆಯಾದಾಗ ಮಗುವನ್ನು ಗಲಾಟೆಯಿಲ್ಲದ, ಚೆನ್ನಾಗಿ ಗಾಳಿ ಬೆಳಕು ಬರುವಂಥ ಕೊಠಡಿಯಲ್ಲಿರಿಸಬೇಕು. ಸುಲಭವಾಗಿ ಜೀರ್ಣಿಸುವ ಗಂಜಿ, ಹಣ್ಣಿನ ರಸ, ಗ್ಲೂಕೋಸ್ ನೀರು, ಹಾಲು-ಇವನ್ನು ಕೊಡಬೇಕು. ಮಗುವಿಗೆ ಬೇಸರವಾಗದಂತೆ ಅದು ಮಲಗಿದ್ದಲ್ಲೇ ಕಥೆ ಹೇಳಬಹುದು. ಆಟಿಕೆಗಳನ್ನು ಕೊಡಬಹುದು. ಈ ಬಗೆಯ ಸ್ನೇಹ ವರ್ತನೆಯಿಂದ, ವೈದ್ಯರ ಸರಿಯಾದ ಚಿಕಿತ್ಸೆಯಿಂದ ಮಗು ಬೇಗ ಗುಣಹೊಂದುತ್ತದೆ.

ಹೀಗೆ ಹಸುಗೂಸನ್ನು ದೊಡ್ಡದನ್ನಾಗಿ ಮಾಡುವುದು ಬಹು ಹಿರಿಯ ಜವಾಬ್ದಾರಿ. ಆರೈಕೆ ಯೋಗ್ಯವಾಗಿದ್ದರೆ ಮಾತ್ರ ಮಗು ದೈಹಿಕವಾಗಿ ಮಾನಸಿಕವಾಗಿ ಒಳ್ಳೆಯ ಪ್ರಜೆಯಾಗಿ ಬೆಳೆಯುತ್ತದೆ. ಮಗುವಿನ ಮುಂದಿನ ಎಲ್ಲ ಪ್ರಗತಿಗೂ ಅಗತ್ಯವಾದ ತಳಹದಿ ಅದರ ಮೊದಲ ಎರಡು ವರ್ಷಗಳ ಜೀವನವನ್ನವಲಂಬಿಸಿದೆಯಾಗಿ ಆ ವಯಸ್ಸು ಬರುವವರೆಗೆ ಮಕ್ಕಳನ್ನು ಸರಿಯಾಗಿ ಸಾಕುವ ಕೆಲಸ ನಿಜಕ್ಕೂ ಶ್ರಮಸಾಧ್ಯ ವಾದುದು. ಬಹು ಮುಖ್ಯವಾದುದು.			  (ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ